ಬಯಲು ಪಾಠಶಾಲೆ - 
	ದೈಹಿಕ ದೌರ್ಬಲ್ಯವಿರುವ ಮಕ್ಕಳ ಆರೋಗ್ಯ ಸುಧಾರಣೆಗಾಗಿ ಪ್ರಚಾರಕ್ಕೆ ಬಂದ ಶಿಕ್ಷಣ ಸಂಸ್ಥೆ (ಓಪನ್ ಏರ್ ಸ್ಕೂಲ್). ಯೂರೋಪಿನ ಬರ್ಲಿನ್ ಪಟ್ಟಣದ ಚಾರ್ಲೊಟನ್ ಬರ್ಗ್‍ನಲ್ಲಿ, ಆಧುನಿಕವಾಗಿ ಮೊಟ್ಟಮೊದಲು (1904) ಆರಂಭವಾಗಿ ಪ್ರಚಾರಕ್ಕೆ ಬಂತು. ಅನಂತರ ಅಮೆರಿಕದಲ್ಲಿ ಅಧಿಕ ಸಂಖ್ಯೆಯಲ್ಲಿ ಇಂಥ ಶಾಲೆಗಳು ಹುಟ್ಟಿ ಜನಪ್ರಿಯವಾದುವು.

	ಬಯಲು ಶಾಲೆಗಳ ಕಲ್ಪನೆ ಆಧುನಿಕವಾಗಿ ತೋರಿದರೂ ಪ್ರಾಚೀನಕಾಲದಿಂದಲೂ ಎಲ್ಲ ದೇಶಗಳಲ್ಲೂ ಇವು ಒಂದಲ್ಲ ಒಂದು ರೂಪದಲ್ಲಿ ಪ್ರಚಾರದಲ್ಲಿದ್ದ ಅಂಶ ಪುರಾಣೇತಿಹಾಸಗಳಿಂದ ಸ್ಪಷ್ಟಪಡುತ್ತದೆ. ಭಾರತದಲ್ಲಿ ಪ್ರಾಚೀನಕಾಲದ ಋಷ್ಯಾಶ್ರಮಗಳು ಮರದ ಕೆಳಗೆ, ವನಾಂತರದ ಬಯಲುಗಳಲ್ಲಿ ಇಂಥ ಶಾಲೆಗಳನ್ನು ನಡೆಸುತ್ತಿದ್ದುವು, ಗುರುಕುಲದಲ್ಲೂ ಪಾಠಪ್ರವಚನಗಳು ಹೊರಾಂಗಣಗಳಲ್ಲೆ ನಡೆಯುತ್ತಿದ್ದುವು. ಬೌದ್ಧವಿಹಾರಗಳಲ್ಲೂ ಜೈನಬಸದಿಗಳಲ್ಲೂ ಉಪದೇಶಾದಿ ಪಾಠಗಳು ನಡೆಯುತ್ತಿದ್ದುದು ಬಯಲಿನಲ್ಲೆ. ಮಧ್ಯಕಾಲದ ಯುರೋಪಿನ ವಿಶ್ವವಿದ್ಯಾಲಯಗಳು ಇಂಥ ಬಯಲು ವ್ಯಾಸಂಗಕ್ಕೆ ಅವಕಾಶ ಕಲ್ಪಿಸಿದ್ದುವು. ಬಯಲು ರಂಗಭೂಮಿ ಒಂದು ರೀತಿಯ ಬಯಲುಶಾಲೆಯೆ. ಈಚೆಗೆ ಭಾರತದಲ್ಲಿ ಕಾಂಗ್ರೀ ಗುರುಕುಲ ವಿಶ್ವವಿದ್ಯಾಲಯ, ವಿಶ್ವಭಾರತಿ ಮುಂತಾದ ಆಧುನಿಕ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಂಗೀತಪಾಠ, ಚರ್ಚೆ, ಸೈದ್ಧಾಂತಿಕ ಜ್ಞಾನ ಮುಂತಾದ ವ್ಯಾಸಂಗಕ್ರಮಗಳಿಗೆ ಮರದ ಕೆಳಗೊ ಬಯಲು ಪ್ರದೇಶದಲ್ಲೊ ಅವಕಾಶ ಕಲ್ಪಿಸಿರುವುದುಂಟು.

	ದೈಹಿಕ ದೌರ್ಬಲ್ಯವಿರುವ ಮಕ್ಕಳಿಗೆ ಮಾತ್ರ ಇಂಥ ಶಾಲೆಗಳು ಸೀಮಿತವಾಗಿರಬೇಕಾಗಿಲ್ಲ. ಆರೋಗ್ಯವಂತ ಮಕ್ಕಳಿಗೂ ಒಳಾಂಗಣ ಶಾಲೆಗಳಿಗಿಂತ ಹೊರಾಂಗಣ ಶಾಲೆಗಳು ಹೆಚ್ಚು ಉಚಿತ ಎಂಬ ಭಾವನೆ ಈಗ ವಿದ್ಯಾತಜ್ಞರಲ್ಲಿ ಮೂಡಿದೆ.

	ವಿದ್ಯಾರ್ಥಿಗಳು ವ್ಯಾಸಂಗ ಮಾಡುವುದರಿಂದ, ತರಗತಿಯ ನಾಲ್ಕು ಗೋಡೆಗಳ ಒಳಗಿನ ಕಟ್ಟುಕಟ್ಟುಳೆಗಳ ಬಿಗು ಇಲ್ಲದೆ ನಿರಾಯಾಸವಾಗಿ ಕಲಿಯಬಲ್ಲರು, ನಿಸರ್ಗದ ಸೊಗಸು ಸೌಂದರ್ಯಗಳು ಅವರ ಜೀವನವನ್ನೂ ಶೈಕ್ಷಣಿಕ ಬೆಳವಣಿಗೆಯನ್ನೂ ಸುರೂಪಗೊಳಿಸುವ ಅವಕಾಶ ಒದಗಿದಂತಾಗುತ್ತದೆ. ಜೊತೆಗೆ ಬಯಲಿನಲ್ಲಿ ಯಥೇಚ್ಛವಾಗಿ ಗಾಳಿ, ಬೆಳಕುಗಳು ದೊರೆತು ಅವರ ಆರೋಗ್ಯ ಹಾಗೂ ಸಾಮಾನ್ಯ ಸಾಮಥ್ರ್ಯಗಳೂ ಉತ್ತಮಗೊಳ್ಳುತ್ತವೆ. ಇಷ್ಟಲ್ಲದೆ ಬಯಲು ಶಾಲೆಗಳು ಸಮಾಜಕ್ಕಾಗಲಿ ಸರ್ಕಾರಕ್ಕಾಗಲಿ ಹೊರ ಎನಿಸವು. ಭಾರತದಂಥ ಉಷ್ಣವಲಯದ ಪ್ರದೇಶಕ್ಕೆ ಇವು ಹೇಳಿಮಾಡಿಸಿದಂತಿರುತ್ತವೆ.
(ಜೆ.ಎಂ.ಟಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ